ಅತ್ತ ಅಡುಗೆ ಅನಿಲ ಕೊರತೆ: ಇತ್ತ ಬೆಂಗಳೂರಲ್ಲಿ Auto LPG, CNG ದರ ಏಕಾಏಕಿ ಏರಿಕೆಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಬಿಸಿ ಬೆಂಗಳೂರಿಗರನ್ನ ತಟ್ಟಲು ಆರಂಭಿಸಿದೆ. ಯುದ್ಧೋನ್ಮಾದದ ಪರಿಣಾಮವಾಗಿ ಅಡುಗೆ ಅನಿಲದ ಬೆಲೆ ಜಾಸ್ತಿ ಆಗಿದೆ. ಅಷ್ಟೇ ಅಲ್ಲ.. ಆಟೋ ಗ್ಯಾಸ್ ಎಲ್‌ಪಿಜಿ ಹಾಗೂ ಸಿಎನ್‌ಜಿ ಬೆಲೆಗಳೂ ಗಗನಮುಖಿ ಆಗಿವೆ. ಜೀವನಕ್ಕಾಗಿ ಆಟೋ ಹಾಗೂ ಕ್ಯಾಬ್ ಅನ್ನೇ ನಂಬಿರುವ ಚಾಲಕರಿಗೆ ಇದರಿಂದ ಸಂಕಷ್ಟ ಶುರುವಾಗಿದೆ.
ಮಧ್ಯಪ್ರಾಚ್ಯದಲ್ಲಿ ಯುದ್ಧೋನ್ಮಾದ ಹೆಚ್ಚಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ದಾಖಲೆ ಮಟ್ಟಕ್ಕೆ ಜಿಗಿದಿದೆ. ಇತ್ತ ಅಡುಗೆ ಅನಿಲದ ಬಿಸಿ ಗ್ರಾಹಕರಿಗೆ ತಟ್ಟಲಾರಂಭಿಸಿದೆ. ಬೆಂಗಳೂರಿನಲ್ಲಿ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಪೂರೈಕೆ ಸ್ಥಗಿತಗೊಂಡಿದ್ದು, ಇಂದಿನಿಂದ ಬಹುತೇಕ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಬಂದ್ ಆಗಲಿವೆ. ಮನೆ ಬಳಕೆಯ ಅಡುಗೆ ಅನಿಲ ಬೆಲೆಯನ್ನ ಕೇಂದ್ರ ಸರ್ಕಾರ ಪ್ರತಿ ಸಿಲಿಂಡರ್‌ಗೆ 60 ರೂಪಾಯಿ ಹೆಚ್ಚು ಮಾಡಿದೆ. ಈ ನಡುವೆ ಆಟೋ ಗ್ಯಾಸ್ ಎಲ್‌ಪಿಜಿ ಮತ್ತು ಸಿಎನ್‌ಜಿ ದರಗಳು ಸಹ ಏಕಾಏಕಿ ಏರಿಕೆ ಕಂಡಿವೆ.
ಆಟೋ ಎಲ್‌ಪಿಜಿ ದರ ಏರಿಕೆ:
ಆಟೋಗಳಿಗೆ ಬಳಸಲಾಗುವ ಎಲ್‌ಪಿಜಿ ಗ್ಯಾಸ್ ಬೆಲೆ ಈ ಹಿಂದೆ 58 ರೂಪಾಯಿ ಇತ್ತು. ಈಗ ದರವನ್ನ ದಿಢೀರ್ ಜಾಸ್ತಿ ಮಾಡಲಾಗಿದೆ. ಕೆಲವು ಕಡೆ ಪ್ರತಿ ಲೀಟರ್‌ಗೆ 59 ರೂಪಾಯಿ ಇಂದ ಹಿಡಿದು 69.74 ರೂಪಾಯಿವರೆಗೆ ದರವನ್ನ ಏರಿಸಲಾಗಿದೆ. ಸಡನ್ ಆಗಿ ಪ್ರತಿ ಲೀಟರ್‌ಗೆ 10-12 ರೂಪಾಯಿವರೆಗೂ ಜಾಸ್ತಿ ಆಗಿರೋದು ಆಟೋ ಚಾಲಕರಿಗೆ ಆಘಾತ ತಂದಿದೆ.
ಸಿಎನ್‌ಜಿ ದರವೂ ಏರಿಕೆ:
ಕಾರುಗಳು ಹಾಗೂ ಕ್ಯಾಬ್‌ಗಳಿಗೆ ಬಳಸಲಾಗುವ ಸಿಎನ್‌ಜಿ ದರ ಈ ಹಿಂದೆ ಕೆಜಿಗೆ 88 ರೂಪಾಯಿ ಇತ್ತು. ಈಗ ಅದು ಏಕಾಏಕಿ 90 ರೂಪಾಯಿ ಗಡಿ ದಾಟಿದೆ. ಆ ಮೂಲಕ ಸಿಎನ್‌ಜಿ ದರ ದಾಖಲೆಯ ಮಟ್ಟಕ್ಕೆ ಏರಿಕೆಯಾಗಿದೆ.
ಸವಾರರ ಮೇಲೆ ಹೊರೆ:
ಏಕಾಏಕಿ ಆಟೋ ಗ್ಯಾಸ್ ಮತ್ತು ಸಿಎನ್‌ಜಿ ಬೆಲೆ ಜಾಸ್ತಿ ಆಗಿರೋದ್ರಿಂದ ಆಟೋ ಚಾಲಕರು ಹಾಗೂ ಕ್ಯಾಬ್ ಚಾಲಕರು ಸವಾರರಿಂದ ಕಿ.ಮೀಗೆ ಹೆಚ್ಚುವರಿ ದರ ಕೇಳುತ್ತಿದ್ದಾರೆ. ಇದರಿಂದ ಪ್ರತಿ ದಿನ ಆಟೋ ಹಾಗೂ ಕ್ಯಾಬ್‌ನಲ್ಲಿ ಓಡುವವರ ಜೇಬಿಗೆ ಕತ್ತರಿಬೀಳುವಂತಾಗಿದೆ.
ಆಟೋ ಚಾಲಕರು ಹೇಳೋದೇನು?
‘’ಕಳೆದ 6 ವರ್ಷಗಳಿಂದ ಬೆಂಗಳೂರಲ್ಲಿ ಆಟೋ ಓಡಿಸುತ್ತಿದ್ದೇನೆ. ಈಗೀಗ ಆಟೋದಲ್ಲಿ ಓಡಾಡುವವರ ಸಂಖ್ಯೆ ಕಡಿಮೆ ಆಗಿದೆ. ಈ ಮಧ್ಯೆ ಗ್ಯಾಸ್ ಬೆಲೆಯೂ ಏರಿಕೆ ಮಾಡುತ್ತಿದ್ದರೆ, ನಮ್ಮ ಜೀವನ ಕಷ್ಟವಾಗುತ್ತದೆ. ಈಗ ಮೀಟರ್ ಮೇಲೆ ಅನಿವಾರ್ಯವಾಗಿ 10-20 ರೂಪಾಯಿ ಹೆಚ್ಚುವರಿಯಾಗಿ ಸವಾರರ ಬಳಿ ಕೇಳಲೇಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಕೆಲವರು ಕೊಡುತ್ತಾರೆ, ಕೆಲವರು ಕೊಡಲ್ಲ’’ ಎಂದು ‘ವಿಜಯ ಕರ್ನಾಟಕ ಡಿಜಿಟಲ್’ ಬಳಿ ಅಳಲು ತೋಡಿಕೊಂಡಿದ್ದಾರೆ ಆಟೋ ಚಾಲಕ ಸಂಗಮೇಶ್.
ಕ್ಯಾಬ್ ಚಾಲಕರು ಏನಂತಾರೆ?
‘’ದಿನಪೂರ್ತಿ ರಸ್ತೆಯಲ್ಲೇ ಇರ್ತೀವಿ. ಆದರೂ ನಮಗೆ ಸಿಗುವ ಲಾಭ ಅಷ್ಟಕಷ್ಟೆ. ಈಗ ಸಿಎನ್‌ಜಿ ದರವನ್ನೂ ಜಾಸ್ತಿ ಮಾಡಿದ್ದಾರೆ. ಈಗ ಹೇಗಾಗಿದೆ ಅಂದ್ರೆ.. ಪೆಟ್ರೋಲ್ – ಡೀಸೆಲ್ ಬೆಲೆಗೂ ಸಿಎನ್‌ಜಿ ಬೆಲೆಗೂ ಜಾಸ್ತಿ ವ್ಯತ್ಯಾಸವೇ ಇಲ್ಲ. ಮುಂಚೆ ಸಿಎನ್‌ಜಿ 60 ರೂಪಾಯಿ ಇತ್ತು. ಏರಿಕೆ ಮಾಡಿ ಮಾಡಿ ಈಗ 90 ರೂಪಾಯಿಗೆ ತಂದಿದ್ದಾರೆ. ಹೀಗೆ ಆದರೆ ನಾವು ಜೀವನ ಮಾಡೋದು ಹೇಗೆ?’’ ಅಂತ ‘ವಿಜಯ ಕರ್ನಾಟಕ ಡಿಜಿಟಲ್’ ಬಳಿ ಸಂಕಟ ಪಟ್ಟಿದ್ದಾರೆ ಕ್ಯಾಬ್ ಚಾಲಕ ತಿರುಮಲ.